Friday, September 19, 2008

ಗಣಪ.... ಮತ್ತೆ ಬರುವೆಯಲ್ಲವೇ ಮುಂದಿನ ವರ್ಷ?

ಗಣಪ.... ಮತ್ತೆ ಬರುವೆಯಲ್ಲವೇ ಮುಂದಿನ ವರ್ಷ?


    ಅಡಿಗೆ ಮನೆಗೆ ನುಗ್ಗುವ ಮುನ್ನವೇ ನಮ್ಮ ಮೂಗಿನ ಹೊಳ್ಳೆಗಳನ್ನು ಆವರಿಸುವ ಕರಿದ ತಾಜಾ ಚಕ್ಕುಲಿಗಳ ಸುವಾಸನೆ, ಬಿಸಿ ಬಿಸಿಯಾಗಿ ಹಬೆ ಹೊರಸೂಸುವ ಕಡಬುಗಳ ಅಪ್ಯಾಯಮಾನ ಸ್ಪರ್ಶ, ತುಪ್ಪದಲ್ಲಿ ಅದ್ದಿದ ದೀಪದ ಬತ್ತಿಗಳ ಸಾಲು, ಕಾಮಾಲೆ ರೋಗ ಬಂದಂತೆ ಕಾಣುವ ಹುಣಸೆ ರಸ ಬಳೆದ ಹಿತ್ತಾಳೆ ಪಾತ್ರೆಗಳು, ಅಡಿಗಟ್ಟಲೆ ಎಳೆದರೂ ಹರಿಯದ ಒಬ್ಬಟ್ಟಿನ ಹಿಟ್ಟು, ಹೂರಣದ ಆಸೆಗಾಗಿ ಕಾದಿರುವ ಪುಟ್ಟ ಬೆಕ್ಕು, ಮಂಟಪಕ್ಕೆ ತೋರಣ ಕಟ್ಟುವ ಭರಾಟೆ, ಉಜ್ಜುವ, ತೊಳೆಯುವ, ಒಗೆಯುವ ಸರ ಬರ ಸದ್ದುಗಳ ಏಕತಾನತೆಯ ನಡುವೆ ‘ಚಂದ್ರನ್ನ ನೋಡೀರೋ ಜೋಕೆ’ ಎಂದು ಆಗಾಗ ಗುಟುರು ಹಾಕುವ ಕೆಂಪುಡುಗೆಯ ಮಡಿ ಅಜ್ಜಿ, ಗಣಪತಿ ತರಲು ಗದ್ದೆ ಬದುವಿನಲ್ಲಿ ಹೋಗುವುದೋ ಇಲ್ಲಾ ಸರ್ಕಾರಿ ರಸ್ತೆಯಲ್ಲೇ ಹೋಗುವುದೋ ಎಂದು ಯೋಚಿಸುತ್ತಿರುವ ಅಪ್ಪ, ತಾವೂ ಬರುತ್ತೇವೆಂದು ಹಟ ಹಿಡಿದು ಹಿಂದೆ ಮುಂದೆ ಸುತ್ತುತ್ತಿರುವ ಮಕ್ಕಳು.

     ಗಣಪ, ದೇವರಾದರೂ ಅವನನ್ನೇ ಮಾರಿ ಪುಡಿಗಾಸು ಸಂಪಾದಿಸುವ ಕತ್ಲೆಗದ್ದೆಯ ಭಂಡಾರಿ ಮಾಮ, ಅವನೊಡನೆ ದೇವರಿಗಾಗಿ ಚೌಕಾಸಿಗಿಳಿಯುವ ಜನರು, ಕೊನೆಗೂ ಜಗ್ಗಾಡಿ ಎಳೆದಾಡಿ ಎರಡು ರೂಪಾಯಿ ಉಳಿಸಿದೆವು ಎಂದು ಗಣಪತಿಯೊಡನೆ ತಮ್ಮ ತಮ್ಮ ಮನೆಗಳೆಡೆಗೆ ಕಾಲು ಹಾಕುತ್ತಿದ್ದರೆ, ಇತ್ತ ಭಂಡಾರಿ ಮಾಮ ಜನ ಕೊಟ್ಟ ಮುದ್ದೆಯಾಗಿರುವ ನೋಟುಗಳನ್ನೂ ಚಿಲ್ಲರೆಗಳಾನ್ನೂ ಎಣಿಸಿ ಸಂತೃಪ್ತಿಯಿಂದ ಉಸಿರು ಬಿಡದಿದ್ದರೂ ನಿಟ್ಟುಸಿರನ್ನಾದರೂ ಹೊರಗೆಡಹುತ್ತಾನೆ, ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಈ ವರ್ಷವೂ ಸುಳ್ಳಾಗುತ್ತದೆ.

    ಇತ್ತ ಗದ್ದೆ ಬದುವಿನಿಂದ ಹೊರಟ ಗಣಪನನ್ನು ಹೊತ್ತ ಹಿಂಡು, ಕೇಕೆ ಹಾಕುತ್ತಾ ಗಣಪತಿ ಬಪ್ಪ ಎಂದು ಕೂಗುತ್ತಾ, ಮನೆಯೆಡೆಗೆ ಸಾಗುತ್ತದೆ. ಗಣಪ, ಮಾನವ ಕಟ್ಟಿದ ಮಂಟಪದಲ್ಲಿ ವಿರಾಜಮಾನನಾಗುತ್ತಲೇ ನಮಗೆಲ್ಲ ಪೂಜೆ ಮಾಡುವ ಭಟ್ಟರ ಯೊಚನೆ ಶುರುವಾಗುತ್ತದೆ. ಈ ಊರಿಗೋ ಇರುವವರೊಬ್ಬರೇ ಭಟ್ಟರು, ಹಣ್ಣು ಹಣ್ಣು ಮುದುಕ ಬೇರೆ, ಎಲ್ಲರ ಮನೆಗಳಲ್ಲೂ ತನ್ನ ಬೊಚ್ಚ ಬಾಯಿಯಲ್ಲಿ ತೊದಲುತ್ತಾ ಗಣಪನಿಗೂ ಅರ್ಥವಾಗದಂತೆ ಮಂತ್ರ ಪಠಣ! ಮಾಡುವ ಈ ಭಟ್ಟರ ಬಗ್ಗೆ ನಮಗೆ ಎಲ್ಲಿಲ್ಲದ ಪ್ರೀತಿ. ಕಾರಣ, ಇವರು ಪೂಜೆ ಮಾಡಿದರೆ ಮಾತ್ರ ನಮ್ಮ ಉದರಕ್ಕೂ ಒಂದು ನೆಲೆ. ಒಮ್ಮೊಮ್ಮೆ ಭಟ್ಟರು ಬರಲು ತಡವಾದರೆ ನಾವೆ ನಮಗೆ ಬರುವ ಮಂತ್ರಗಳನ್ನ ಬಡಬಡಿಸಿ ಊಟಕ್ಕೆ ಕೋಳಿತೇಬಿಡುತ್ತೇವೆ. ಎಲ್ಲವೂ ಹೊಟ್ಟೇಗಾಗಿ ಎಲ್ಲವೂ ಗೇಣು ಬಟ್ಟೆಗಾಗಿ ಎಂಬುದು ಪಾಪ ಆ ಗಣನಾಥನಿಗೂ ಗೊತ್ತಿರಬೇಕು ಹಾಗಾಗಿ ಈವರೆಗೂ ಆತ ಬೇಸರಿಸಿಲ್ಲ.
 
     ಮದ್ಯಾಹ್ನ ಆಗಬೇಕಿದ್ದ ಭಟ್ಟರ ಆಗಮನ ಸಂಜೆಗೊಂತೂ ಆಗುತ್ತದೆ. ಅಂತೂ ಇಂತೂ ಗಣಪನಿಗೆ ಭಟ್ಟರ ಮಂತ್ರ ಪಠಣದ ಕೇಳುವ ಭಾಗ್ಯ! ಸಿಗುತ್ತದೆ. ಹತ್ತಾರು ಆರತಿಗಳು, ನೂರಾರು ಸ್ತೋತ್ರಗಳು, ಐದಾರು ತಿಂಡಿಗಳು, ಮಾರುಗಟ್ಟಲೆ ಹೂವಿನ ರಾಶಿಯ ನಡುವೆ ಗಣಪ ಚೇತರಿಸಿಕೊಳ್ಳುತ್ತಿರುವಾಗಲೇ, ಗಣಪತಿ ನೋಡಲು ಬರುವ ಊರಿನ ಮಕ್ಕಳ ಸಾಷ್ಟಾಂಗ ನಮಸ್ಕಾರಗಳು ದಿಕ್ಕೆಡಿಸುತ್ತವೆ.

  ಮಾರನೇಯ ದಿನವೂ ಇದೇ ಕಾರ್ಯಕ್ರಮಗಳು ಪುನರಾವರ್ತನೆಯಾಗುತ್ತವೆ, ಆದರೆ ಸಂಜೆ ಗಣೇಶನನ್ನು ವಿಸರ್ಜಿಸುವಾಗ ಏನೋ ಕಳೆದುಕೊಳ್ಳುತ್ತಿರುವಂತಹಾ ಭಾವ, ಮಕ್ಕಳಿಗೋ ನಾಳೆಯಿಂದ ಶಾಲೆಗೆ ಹೋಗಬೇಕಲ್ಲ ಎಂಬ ಸಂಕಟ, ಕೆಲಸ ಮಾಡಿ ಮಾಡಿ ಹೈರಾಣಾಗಿರುವ ಮನೆ ಹೆಂಗಸರಿಗೆ ಸಧ್ಯ ಗಣಪನನ್ನು ನೀರಿಗೆ ಹಾಕಿದರೆ ಸಾಕಪ್ಪ! ಎಂಬ ನಿಟ್ಟುಸಿರು, ಮತ್ತೆ ಮುಂದಿನ ವರ್ಷ ಬರುತ್ತೇನೆ ಎಂದು ಹೇಳುತ್ತಾ ನೀರಿನಲ್ಲಿ ಕಣ್ಮರೆಯಾಗುವನು ಗಣಪ.... ಮತ್ತೆ ಬರುವೆಯಲ್ಲವೇ ಮುಂದಿನ ವರ್ಷ?

ಶಮಂತ್ ಪಾಟೀಲ್.ಜೆ.

1 comment:

ಕಾರ್ತಿಕ್ ಪರಾಡ್ಕರ್ said...

ಬರಹ ಚೆನ್ನಾಗಿದೆ...ಬ್ಲಾಗ್ ಬರವಣಿಗೆ ಹೀಗೆ ಮುಂದುವರಿಯಲಿ.