Thursday, September 25, 2008

ಡೌನ್ಸ್ ಕ್ಯಾಂಟೀನ್ ಎಂಬ ಮಾಸದ ನೆನಪು

ವೈವಿಧ್ಯಮಯತೆ ಎಂದರೆ ಇದು ನೋಡಿ ಲೋಕಲ್ ಬೀಡಿ ಸೇದುವವರೂ ಬರುತ್ತಾರೆ, ಹೈಫೈ ಸಿಗರೆಟ್ ಎಳೆಯುವವರೂ ಸಹ. ಇವರ ಧೂಮಲೀಲೆಯಿಂದ ಕೆಮ್ಮುತ್ತಾ ತಮ್ಮ ಅಸಮ್ಮತಿ ಸೂಚಿಸುವ ಮತ್ತೊಂದಷ್ಟು ಜನ. ಈ ನಡುವೆ ಗಿರಾಕಿ ಸೂಚಿಸಿದ ತಿಂಡಿ ತೀರ್ಥಗಳ ಪಟ್ಟಿಯನ್ನು ತನ್ನದೇ ಧಾಟಿಯಲ್ಲಿ ಅಡಿಗೆ ಭಟ್ಟನಿಗೆ ರವಾನಿಸುವ ಎಂಟು ವರ್ಷದ ಪುಟ್ಟ ಪೋರ. ದಿನವಿಡೀ ಪಾಠ ಹೇಳಿ(ಖಂಡಿತಾ ಇಲ್ಲ), ಅವರು ಹೇಳಿದ್ದನ್ನು ಗಮನವಿಟ್ಟು ಕೇಳಿ!(ನಂಬಲು ಸಾಧ್ಯವೇಯಿಲ್ಲ) ಒಂದಿಷ್ಟು ದಣಿವಾರಿಸಿಕೊಳ್ಳಲು ಆಗಮಿಸಿದ ಗುರು-ಶಿಷ್ಯ ವೃಂದ. ಅವರಿವರು ಬಿಸಾಕಿದ ಎಂಜಲನ್ನು ತಿನ್ನಲು ತದೇಕಚಿತ್ತದಿಂದ ನೋಡುತ್ತಿರುವ ಬಡಕಲು ಬೀದಿ ನಾಯಿ ಟೈಗರ್!

ಹೀಗೆ ಹಸಿದವರು, ಹೊಟ್ಟೆತುಂಬಿದವರು, ದೇಸಿವಾದಿಗಳು, ಹೈಫೈ ಪಡ್ಡೆಗಳು, ಬೀದಿನಾಯಿಗಳು, ಧಂ ಎಳೆಯುವವರು, ಧೂಮಲೀಲೆಗೆ ಗರಂ ಆಗುವವರು, ಚಿಲಿಪಿಲಿಗುಟ್ಟುವ ಹಕ್ಕಿಗಳಂತಹಾ ಎಲ್ಲಾ ಸಾಂದರ್ಬಿಕ ಹಾಗೂ ಅಸಂಗತ ಘಟನೆಗಳ ಅಪ್ಯಾಯಮಾನತೆಯ ಬುತ್ತಿಯನ್ನೇ ಕಟ್ಟಿಕೊಡುವ ಸ್ಥಳವೆಂದರೆ ಗಂಗೋತ್ರಿಯ ಡೌನ್ಸ್ ಕ್ಯಾಂಟೀನ್.

ಗಂಗೋತ್ರಿ ಮತ್ತು ಜೆಸಿಇ ನಡುವಿನ ಕಣಿವೆಯಂತಹಾ ಪ್ರದೇಶದಲ್ಲಿ ಹತ್ತಾರು ಟೇಬಲ್ ಖುರ್ಚಿಗಳ ಹಾಗೂ ನಾಲ್ಕೈದು ಮಳಿಗೆಗಳ ಈ ಸ್ಥಳ ಮಲೆನಾಡ ಪರಿಸರವನ್ನು ನೆನಪಿಸುತ್ತವೆ. ತಗ್ಗಿನ ಪ್ರದೇಶದಲ್ಲಿ ಕಟ್ಟಿರುವುದರಿಂದ ಈ ಕ್ಯಾಂಟೀನ್‌ಗೆ ಡೌನ್ಸ್ ಎಂದು ಹೆಸರು ಬಂತೇನೊ ಗೊತ್ತಿಲ್ಲ. ಈ ಡೌನ್ಸ್ ಕ್ಯಾಂಟೀನ್ ಕೇವಲ ವಿಶ್ವವಿದ್ಯಾನಿಲಯದ ಗುರು ಶಿಷ್ಯರು ಮಾತ್ರವಲ್ಲದೆ ದಿನನಿತ್ಯ ದಣಿವಾರಿಸಿಕೊಂಡು ಒಂದು ಕಪ್ ಚಹಾ ಕುಡಿದು ದೇಶಾವಾರಿ ಮಾತನಾಡಿ ಮನೆಕಡೆಗೆ ಹೆಜ್ಜೆಹಾಕುವ ವಾಯುವಿಹಾರ ಪ್ರಿಯ ಸಾರ್ವಜನಿಕರಿಗೂ ನೆಚ್ಚಿನ ತಾಣ.

ನೂರಾರು ಜನ ಬಂದು ಹೋಗುವ ಕ್ಯಾಂಟೀನಿನ ಸುತ್ತಲೂ ಗಗನವನ್ನು ಚುಂಬಿಸುವಂತೆ ಬೆಳೆದು ನಿಂತ ತೆಂಗಿನ ಮರಗಳು, ಆಗೊಮ್ಮೆ ಈಗೊಮ್ಮೆ ಕೂಗುವ ಹಕ್ಕಿಗಳು, ಜೆಸಿಇ ಲಲನೆಯರು, ದೊಡ್ಡ ದೊಡ್ಡ ಕಾರು ಬೈಕುಗಳು, ಅದರ ಬಾನಿಟ್ ಮೇಲೆ ಕೂತು ಗಹನ ಚರ್ಚೆಯಲ್ಲಿ ಮುಳುಗುವ ಪಡ್ಡೆಗಳು.... ಒಂದು ಅಬ್ಸ್‌ಟ್ರ್ಯಾಕ್ಟ್ ಕಲಾಕೃತಿಯಂತೆ ಕಂಡುಬರುತ್ತದೆ.

ಬರೆಯುತ್ತಾ ಹೋದರೆ ಡೌನ್ಸ್ ಕ್ಯಾಂಟೀನ್ ಬಗ್ಗೆ ಕಾಲಂಗಟ್ಟಲೆ ಬರೆಯಬಹುದು ಆದರೆ, ಅವುಗಳು ಕೇವ ಮಟೀರಿಯಲಿಸ್ಟಿಕ್ ಆಗಿ ಕಾಣುತ್ತವೆ. ಅದರರ್ಥ ಈಗ ಬರೆದಿರುವುದೆಲ್ಲಾ ರಿಯಲಿಸ್ಟಿಕ್ ಎಂದು ಹೇಳುತ್ತಿಲ್ಲ. ಕಾರಣ ಕ್ಷಣ ಕ್ಷಣಕ್ಕೂ ಬದಲಾಗುವ ರಂಗದ ಮೇಲಿನ ಪರಿಕರಗಳಂತೆ ಈ ಡೌನ್ಸ್ ಕೂಡ ಹೊಸ ಹೊಸ ಅನುಭವಗಳನ್ನು ಉಂಟುಮಾಡುತ್ತದೆ ಎಂಬುದು ಹಲವರ ಅಂಬೋಣ. ಹಾಗಾಗಿ ಈ ಬರಹಕ್ಕೆ ಫುಲ್ ಸ್ಟಾಪ್.

ಶಮಂತ್ ಪಾಟೀಲ್.ಜೆ.

No comments: