Thursday, September 25, 2008

ಡೆಸ್ಕ್ ಎಂಬ ಅಮರಕೋಶ

ಮೊನ್ನೆ ಮಹಾರಾಜ ಕಾಲೇಜಿಗೆ ಹೋಗಿದ್ದೆ. ಸುಮಾರು ಮೂರು ವರ್ಷಗಳು ನಾನು ಓದಿದ, ಹರಟೆ ಕೊಚ್ಚಿದ ಕಾಲೇಜದು. ಕಾರಿಡಾರ್‌ನಲ್ಲಿ ಮುನ್ನಡೆದಂತೆ ಖಾಲಿ ಇದ್ದ ಕ್ಲಾಸೊಂದು ಕಣ್ಣಿಗೆ ಬಿದ್ದು ಅಲ್ಲೇ ಹಿಂದಿನ ಬೆಂಚೊಂದರಲ್ಲಿ ಕುಳಿತೆ. ಆ ಬೆಂಚಿನ ಮೇಲೆ ಬರೆದಿದ್ದ ಲೆಕ್ಕವಿಲ್ಲದಷ್ಟು ಕೈಬರಹಗಳ ನಡುವೆ ನಾನು ಅಂದು ಬರೆದಿದ್ದ ನನ್ನದೇ ಹೆಸರನ್ನು ಹುಡುಕತೊಡಗಿದೆ. ಈ ಮಧ್ಯೆ ಒಂದು ವಿಷಯ ತುಂಬಾ ಕಾಡತೊಡಗಿತು. ಅದೇ ಬೆಂಚು-ಖುರ್ಚಿಗಳು. ನೂರಾರು ವರ್ಷಗಳಿಂದ ಆ ನಾಲ್ಕು ಗೋಡೆಗಳ ನಡುವಲ್ಲಿ ನಡೆಯುವ ಅಧ್ಯಯನ, ಪ್ರೀತಿ, ಪ್ರೇಮ, ಕೋಪ, ತಾಪ, ವಾಗ್ಯುದ್ಧಗಳನ್ನು ಕೇಳಿಕೊಳ್ಳುತ್ತಾ ನಿರ್ಭಾವುಕವಾಗಿ ನಿಂತಿರುವ ಅದೇ ಬೆಂಚು-ಖುರ್ಚಿಗಳು.

ತೇಗ, ಹಲಸು, ಹೊನ್ನೆ ಮರಗಳಿಂದ ಮಾಡಿದ ಆ ಪೀಠೋಪಕರಣಗಳ ದೃಢತೆಗಿಂತ ತುಂಬಾ ವಿಸ್ಮಯಕಾರಿಯಾಗಿ ಕಂಡದ್ದು, ಅವುಗಳ ಮೇಲೆ ಎಲ್ಲೆಂದರಲ್ಲಿ, ಕೊಂಚವೂ ಜಾಗವಿಲ್ಲದಂತೆ ರಚಿತವಾಗಿರುವ ಹಸ್ತಾಕ್ಷರಗಳು! ಅಲ್ಲಿ ಏನುಂಟು? ಏನಿಲ್ಲ? ಮಹಾನ್ ವ್ಯಕ್ತಿಗಳ ನುಡಿಗಳು, ವಿದ್ಯಾರ್ಥಿಗಳ ಹೆಸರುಗಳು, ಅವರ ಪ್ರೇಯಸಿಯರ ನಾಮಧೇಯಗಳು, ಹೃದಯಾಕಾರದ ಚಿತ್ರದೊಳಗೆ ಮಿನುಗುವ ಪ್ರೇಮಿಗಳು, ಮೇಷ್ಟರುಗಳಿಗಿಟ್ಟಿರುವ ಅಡ್ಡ ಹೆಸರುಗಳು, ಪರೀಕ್ಷೆ ಉತ್ತರಗಳು, ದೇವರ ಹೆಸರು, ಸಿನೆಮಾ ಹೀರೊ ಹೀರೋಯಿನ್‌ಗಳ ಬಿರುದು ಬಾವಲಿಗಳು.... ಅಂದು ನಾವು ಪಾಠ ಕೇಳಲು ಬೇಸರವಾದಾಗ ಬರೆದ ನಮ್ಮದೇ ಹೆಸರು, ಕಿಡಿಗೇಡಿತನದಿಂದ ಯಾವುದೋ ಹುಡುಗನ ಹೆಸರೂಂದಿಗೆ ಇನ್ನಾವುದೋ ಹುಡುಗಿಯ ಹೆಸರನ್ನು ಸೇರಿಸಿ ಬರೆದು, ಆತ-ಆಕೆ ಬಂದೊಡನೆ ಗೊಳ್ ಎಂದು ನಗುತ್ತಿದ್ದುದು ಇಂದು ಬಾಲಿಶವಿನಿಸಿದರೂ ಅಂದು ಮೋಜಾಗಿತ್ತು..... ಹೀಗೆ ಎಲ್ಲವೂ ‘ಲಿಖಿತ’ ರೂಪದಲ್ಲಿ ಅಂದಿನಿಂದ ಇಂದಿನವರೆಗೂ ಲಭ್ಯ.

ಒಂದೊಂದು ಬೆಂಚುಗಳಲ್ಲೂ ಮೂರು ಚಿಕ್ಕ ಚಿಕ್ಕ ಬಾವಿಗಳು. ಹಿಂದಿನ ಕಾಲದಲ್ಲಿ ಬರೆಯಲು ಮಸಿ ಬಳಸಲು ಅನುಕೂಲವಾಗುವಂತೆ ತೋಡಿದ್ದ ‘ಧರ್ಮಾರ್ಥ’ ಬಾವಿಗಳು. ಹಿಂದೆಲ್ಲಾ ಮಸಿಯಿಂದ ತುಂಬಿತುಳುಕುತ್ತಿದ್ದ ಅವು ಇಂದು ಬರಿದಾಗಿವೆ. ಕುತೂಹಲಕ್ಕೆಂದು ಬೆರಳು ಹಾಕಿತಿಕ್ಕಿದರೆ, ಈಗಲೂ ಮಸಿ ಮೆತ್ತಿಕೊಂಡ ಅನುಭವವಾಗುತ್ತದೆ. ಆ ಬಾವಿಗಳಲ್ಲಿ ನಾವು ಪೇಪರ್ ಉಂಡೆಗಳನ್ನು ಎಸೆದು ಒಳಗೆ ಬೀಳಿಸುವ ಆಟವಾಡಿದ್ದು, ಹೀಗೆ ಬೆಂಚುಗಳು ಆಟದ ‘ಮೈದಾನವಾಗಿ’, ಬರೆಯುವ ‘ಪೇಪರ್’ ಆಗಿ ಪರಿವರ್ತಿತವಾಗುತ್ತಿದ್ದುದು ನಮ್ಮ ಅತಿಯಾದ ಇಚ್ಛಾಶಕ್ತಿ೦ii ಮತ್ತು ಊಹಾಶಕ್ತಿಯ ಪ್ರತೀಕಗಳೇನೋ!

ಬೆಂಚುಗಳ ವಿಷಯವನ್ನು ಮೆಲುಕು ಹಾಕುತ್ತಿದ್ದಂತೆ ಅನೇಕ ಘಟನೆಗಳು ತಾಮುಂದು ತಾಮುಂದು ಎಂದು ನೆನಪಿಗೆ ಬರತೊಡಗಿತು. ಕೆಲವು ವರ್ಷಗಳ ಹಿಂದೆ, ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ತಾವು ಓದಿದ ಮಹಾರಾಜ ಕಾಲೇಜಿಗೆ ಭೇಟಿ ನೀಡಿದ್ದಾಗ, ತಾವು ವಿದ್ಯಾರ್ಥಿಯಾಗಿದ್ದಾಗ, ಬೆಂಚಿನ ಮೇಲೆ ಬರೆದ ‘ಆರ್.ಕೆ.ಎಲ್’ ಕೋಡ್‌ವರ್ಡಿಗೆ ಹುಡುಕಿದ್ದ ಘಟನೆ ಇಂದಿಗೂ ‘ಬೆಂಚು ಲೇಖಕ’ರಿಗೆ ಪ್ರೇರಕ ಶಕ್ತಿಯಾಗಿ ಕಾಣುತ್ತಿದೆ ಎಂಬುದು ಹಲವರ ಅಂಬೋಣ.

ಮಹಾರಾಜ ಕಾಲೇಜಿನ ಗೋಡೆ ಪತ್ರಿಕೆಯೊಂದರಲ್ಲಿ ‘ಝಲಕ್’ಎಂಬ ಹೆಸರಿನ ಕಾಲಂನಲ್ಲಿ ಹೀಗೆ ಬರೆದಿದ್ದರು, ಮೂರು ಮಾಟಗಾತಿಯರು ಒಂದೆಡೆ ಮಾತಿಗೆ ಕುಳಿತಾಗ, ಮೊದಲನೆ ಮಾಟಗಾತಿ ಇತರರನ್ನು ಕುರಿತು ‘ವಿಶ್ವದ ಅತ್ಯುತ್ತಮ ವಿಶ್ವಕೋಶ ಯಾವುದು? ಎಂದು ಸವಾಲು ಹಾಕುತ್ತಾಳೆ. ಅದಕ್ಕೆ ಉತ್ತರವೆಂಬಂತೆ, ಎರಡನೆ ಮಾಟಗಾತಿ ಬ್ರಿಟಾನಿಕಾ ವಿಶ್ವಕೋಶವೇ ಅತ್ಯುತ್ತಮ ಎಂದು ಹೇಳುತ್ತಾಳೆ. ತಾನೇನು ಕಮ್ಮಿ ಎಂದು ಮೂರನೇ ಮಾಟಗಾತಿ ಎನ್ಕಾರ್ಟಾ ಎಂದು ಉಸರುತ್ತಾಳೆ. ಎರಡೂ ಉತ್ತರಗಳಿಂದಲೂ ತೃಪ್ತಳಾಗದ ಮೊದಲನೇ ಮಾಟಗಾತಿ ಅಲ್ಲೇ ‘ಓದುತ್ತಾ’ ಕುಳಿತಿದ್ದ ಮಹಾರಾಜ ಕಾಲೇಜಿನ ವಿದ್ಯಾರ್ಥಿಯನ್ನು ಕರೆದು ಅದೇ ಪ್ರಶ್ನೆಯನ್ನು ಕೇಳುತ್ತಾಳೆ. ಕೊಂಚವೂ ಯೋಚಿಸದೆ ಆತ ‘ವಿಶ್ವದ ಅತ್ಯುತ್ತಮ ವಿಶ್ವಕೋಶ ಮಹಾರಾಜಾ ಕಾಲೇಜಿನ ಬೆಂಚುಗಳು’ ಎಂದು ಥಟ್ ಅಂತ ಹೇಳುತ್ತಾನೆ. ಉತ್ತರದಿಂದ ಸುಪ್ರಿಯಳಾದ ಮಾಟಗಾತಿ ಅವನಿಗೆ ತನ್ನ ಏಕಮಾತ್ರ ಪುತ್ರಿಯೊಂದಿಗೆ ಮಹಾರಾಜ ಕ್ಯಾಂಟೀನಿಗೆ ಡೇಟಿಂಗ್ ಕಳುಹಿಸುತ್ತಾಳೆ. ಅವಳೊಂದಿಗೆ ಹೋದ ಭೂಪ ಯಾರು? ಎಂಬ ಪ್ರಶ್ನೆಯೊಂದಿಗೆ ಆ ಬರಹ ಕೊನೆಗೊಳ್ಳುತ್ತದೆ.

ಯಾವ ಪುಣ್ಯಾತ್ಮನ ಕೈಯಲ್ಲಿ ಈ ಕಥೆ ಜನ್ಮ ತಾಳಿತೋ ಗೊತ್ತಿಲ್ಲ. ಆದರೆ ಆ ಬೆಂಚುಗಳ ಮೇಲೆ ಆತನಿಗೆ ಎಷ್ಟು ಅಕ್ಕರೆಯಿರಬಹುದು ನೋಡಿ! ವಾಸ್ತವವಾಗಿ ಅವನೊಬ್ಬನಿಗೇ ಅಲ್ಲ ಅಲ್ಲಿ ಕುಳಿತುಕೊಳ್ಳುವ ಹಲವರಿಗೆ ಆ ಬೆಂಚು-ಖುರ್ಚಿಗಳ ಮೇಲೆ ಇನ್ನಿಲ್ಲದ ಪ್ರೀತಿ. ಕೆಲವರೊಂತೂ ವರ್ಷವಿಡೀ ತಮ್ಮ ಖಾಯಂ ಜಾಗಕ್ಕಾಗಿ ತಿಕ್ಕಾಟ ನಡೆಸುತ್ತಲೇ ಇದ್ದರು. ಹಾಗಿತ್ತು ನಮ್ಮ ಸಂಬಂಧ.

ಆಗಾಗ ಹುಡುಗರು ತಮ್ಮ ಸಹಪಾಠಿ ಹುಡುಗಿಯರಿಗೆ, ‘ ನೋಡಮ್ಮ ಮುಂದೆ ನಿನ್ನ ಮಗುವಿಗೆ ಹೆಸರಿಡಲು ಕನ್ಫೂಸ್ ಆದರೆ, ಸೀದ ಇಲ್ಲಿಗೆ ಬಂದು, ಈ ಬೆಂಚುಗಳನ್ನು ನೋಡು, ವಿದಿನ್ ಹತ್ತು ಮಿನಿಟ್‌ನಲ್ಲಿ ಯಾವ ಹೆಸ್ರು ಇಡ್ಬೇಕು ಅಂತ ಡಿಸೈಡ್ ಆಗ್ಬಿಡತ್ತೆ, ಡೋಂಟ್ ವರಿ ಮಾಡ್ಕೊಬೇಡ...’ ಎಂದು ರೇಗಿಸುತ್ತಿದ್ದುದು ಸಾಮಾನ್ಯವಗಿರುತ್ತಿತ್ತು. ಈಗ ಹೇಗಿದೆಯೋ ಗೊತ್ತಿಲ್ಲ. ಕಾಲ ಬದಲಾದಂತೆ ಜೋಕುಗಳೂ, ರೇಗಿಸುವ ರೀತಿ ರಿವಾಜುಗಳೂ ಬದಲಾಗುತ್ತವೆ.

ಹೀಗೆ ಮೇಲಿಂದ ಮೇಲೆ ಹಲವು ನೆನಪುಗಳು ಮನಸ್ಸಿಗೆ ಬಂದು ಅಪ್ಪಳಿಸುತ್ತಿದ್ದಾಗ, ‘ಸಾರ್ ಕಸಾ ಹೊಡೀಬೇಕು ಸ್ವಲ್ಪ ಆಚೆಗೊಗಿ’ ಎಂಬ ಯಾರದೋ ಅಶರೀರವಾಣಿ ಕೇಳಿಬಂತು, ಮತ್ತೊಮ್ಮೆ ಬರುವೆನೆಂದು ಮನಸ್ಸಿನಲ್ಲೇ ಬೆಂಚಿಗೆ ವಿದಾಯ ಹೇಳಿ ಹೊರನಡೆದೆ.

ಶಮಂತ್ ಪಾಟೀಲ್.ಜೆ.

No comments: